Telegram Join My Telegram WhatsApp Join My WhatsApp

ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತೆಗೆ ರಷ್ಯಾ ಆಪತ್ಭಾಂಧವ

ಇರಾನ್ ಹಾರ್ಮುಜ್ ಜಲಸಂಧಿ ಬಂದ್: ತೈಲ ಕೊರತೆ ಆತಂಕದಲ್ಲಿದ್ದ ಭಾರತೆಗೆ ರಷ್ಯಾ ಮತ್ತೆ ಆಪತ್ಭಾಂಧವ!

ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿ ಬಂದ್‌ನಿಂದ ಭಾರತದ ತೈಲ ಪೂರೈಕೆಗೆ ಆತಂಕ ಎದುರಾಗಿದೆ. ದೇಶವು ಕೇವಲ 25 ದಿನಗಳ ತೈಲ ಸಂಗ್ರಹ ಹೊಂದಿರುವಾಗ, ಭಾರತಕ್ಕೆ ರಷ್ಯಾ ಹೆಚ್ಚುವರಿ 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಪೂರೈಸಲು ಸಿದ್ಧವಾಗಿದೆ. ಇದು ಮಧ್ಯಪ್ರಾಚ್ಯದಿಂದಾಗುವ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಿ, ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಸಹಕಾರಿಯಾಗಲಿವೆ.

ನವದೆಹಲಿ, ಮಾರ್ಚ್ 4: ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಕಾರಣ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೂ ಆಗಿದೆ. ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡಿರುವ ಕಾರಣ ಕಚ್ಚಾ ತೈಲ ಪೂರೈಕೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಸಿದ್ಧವಾಗಿದೆ ಎಂದು ವರದಿಯಾಗಿದೆ. ಉದ್ಯಮ ವಲಯದ ಮೂಲಗಳ ಪ್ರಕಾರ, ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಈ ಮೂಲಕ ಮಧ್ಯಪ್ರಾಚ್ಯದಿಂದ ಉಂಟಾದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಸಾಧ್ಯವಾಗಬಹುದು ಎನ್ನಲಾಗಿದೆ.

ಭಾರತವು ಪ್ರಸ್ತುತ ಕೇವಲ 25 ದಿನಗಳ ಬೇಡಿಕೆಗೆ ತಕ್ಕಷ್ಟು ಕಚ್ಚಾ ತೈಲ ಸಂಗ್ರಹ ಹೊಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಇತರೆ ಇಂಧನಗಳ ಸಂಗ್ರಹವೂ ಸೀಮಿತವಾಗಿದೆ. ಹೀಗಾಗಿ ಭಾರತಕ್ಕೆ ಪೂರೈಕೆ ಆತಂಕ ಎದುರಾಗಿದೆ.

ಭಾರತದ ಸುಮಾರು 40% ಕಚ್ಚಾ ತೈಲ ಆಮದು ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಇದು ಬಂದ್ ಆಗಿರುವುದರಿಂದ ಭಾರತ ಪರ್ಯಾಯ ಮೂಲಗಳನ್ನು ಹುಡುಕಲು ಮುಂದಾಗಿದೆ. ಭಾರತೀಯ ರಿಫಾಯನರಿಗಳು ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತಿವೆ.

ರಷ್ಯಾದಿಂದ ಕಚ್ಚಾ ತೈಲ ಆಮದು ಕಡಿಮೆ ಮಾಡಿದ್ದ ಭಾರತ

ಉದ್ಯಮ ಮೂಲಗಳ ಪ್ರಕಾರ, ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ 40% ರವರೆಗೆ ಪೂರೈಸಲು ರಷ್ಯಾ ಸಿದ್ಧವಾಗಿದೆ. ಜನವರಿಯಲ್ಲಿ ರಷ್ಯಾದಿಂದ ಭಾರತಕ್ಕೆ ಪ್ರತಿ ದಿನ ಸುಮಾರು 1.1 ಮಿಲಿಯನ್ ಬ್ಯಾರೆಲ್ ಆಮದು ಮಾಡಲಾಗಿತ್ತು. ಅದು 2022 ರ ನವೆಂಬರ್ ನಂತರದ ಕನಿಷ್ಠ ಮಟ್ಟವಾಗಿತ್ತು. ಆದರೆ ಫೆಬ್ರವರಿಯಲ್ಲಿ ಈ ಪ್ರಮಾಣವು ಮತ್ತೆ 30% ಮಟ್ಟಕ್ಕೆ ಏರಿಕೆಯಾಗಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ರಷ್ಯಾ ತೈಲ ಖರೀದಿಗೆ ಅಡ್ಡಿಯಾಗಿದ್ದ ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ

ಭಾರತೀಯ ತೈಲ ಸಂಸ್ಕರಣಾಗಾರಗಳು ರಷ್ಯಾದ ತೈಲ ಮಾರಾಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ, ಆಮದು ಪ್ರಮಾಣ ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳೂ ಈ ನಿರ್ಧಾರಕ್ಕೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ತೈಲ ಖರೀದಿಯನ್ನು ನಿಲ್ಲಿಸುವ ಭರವಸೆ ನೀಡಿದೆ ಎಂದು ಹೇಳಿದ್ದರು. ಆದರೆ, ಭಾರತ ಮಾತ್ರ ತನ್ನ ತೈಲ ಖರೀದಿ ತಂತ್ರವು ಮಾರುಕಟ್ಟೆ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಆಧಾರದಲ್ಲಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಇನ್ನೂ ಕೆಲವು ದಿನಗಳ ಮಟ್ಟಿಗೆ ಹೀಗೆಯೇ ಮುಂದುವರಿದರೆ, ಭಾರತ ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಪರ್ಯಾಯ ಪೂರೈಕೆ ಮಾರ್ಗಗಳನ್ನು ವಿಸ್ತರಿಸುವ ಸಾಧ್ಯತೆ ಇದ್ದು.

Leave a Comment